ಆಸೆಗಳಿಗೆ ಆಸರೆ
ಕವಿತೆಯೊಂದು ಬರೆವ ಆಸೆ, ಪದಗಳಿಗೇಕೋ ಬರವು
ಪ್ರೀತಿಯ ಆಳ ತೋರಿಸೊ ಆಸೆ, ಸಮಯಕೆ ಏಕೊ ಬರವು
ಸುಮ್ಮನೆ ಬಳಿಯಲಿ ಕೂರುವ ಆಸೆ, ನಿಶ್ಶಭ್ದತೆಗೆ ಏಕೋ ಬರವು
ತೊಳಲಿ ಬಾಚಿ ತಬ್ಬುವ ಆಸೆ, ಧೈರ್ಯಕೆ ಏಕೋ ಬರವು
ಕುಸುಮ ಗಲ್ಲವ ಮುಟ್ಟುವ ಆಸೆ, ಬಾಡದ ನಂಬಿಕೆಯ ಬರವು
ಜೊತೆ ಜೊತೆಯಲೇ ಇರುವ ಆಸೆ, ಕಾಣದ ಕೈಯ ಅದೃಷ್ಟದ ಬರವು
ನಾನು ನಾನಾಗೇ ಇರುವ ಆಸೆ, ನಿನ್ನ ಉಪಸ್ಥಿತಿಯ ಬರವು
ನಿನ್ನೊಡನೆ ಬಾಳು ಬೆಳಗುವ ಆಸೆ, ಆಸೆಗಳಿಗೆ ಆಸರೆಯ ಬರವು
ಆ ಒಂದು ಅಪ್ಪುಗೆ
ಕಡಲ ತೀರದಲಿ, ತೀರದ ಮೌನದ ಜೊತೆಯಲಿ ಕುಳಿತಿರಲು, ಕಾಲನ್ನು ಚುಂಬಿಸಲು ಬಂದ ಅಲೆಯ ಹಾಗೆ
ಮರೀಚಿಕೆಯ ಬೆನ್ನಟ್ಟು ಕಂಗಾಲಾಗಿರಲು, ದಾಹ ತೀರಿಸುವ ಚಿಲುಮೆಯ ಹಾಗೆ
ಬೆಂಗಾಡಲಿ, ಉರಿವ ಬೇಗೆಯಲಿ, ದಾರಿ ಸಿಗದೆ ನಡೆದಿರಲು, ಹೆಮ್ಮರದ ನೆರಳಾದ ಹಾಗೆ
ಅಳುವ ಮಗುವ ಆಕ್ರಂದನ ಮುಗಿಲು ಮುಟ್ಟಿರಲು, ಕಿರುನಗೆ ತರುವ ಹುಣ್ಣಿಮೆ ಚಂದ್ರನ ಹಾಗೆ
ಆ ಒಂದು ಅಪ್ಪುಗೆ, ಅಮ್ಮನ ಮಡಿಲಲಿ ಮಲಗಿದ ಹಾಗೆ
ಇದ್ದರೇನು ಇಲ್ಲದಿದ್ದರೇನು
ನಿನ್ನ ನಿದ್ದೆಗಲ್ಲದ ನನ್ನ ಎದೆ ಇದ್ದರೇನು ಇಲ್ಲದಿದ್ದರೇನು
ನಿನ್ನ ಉಸಿರಿಗೆ ಉಸಿರಾಗದ ನನ್ನ ಉಸಿರು ಇದ್ದರೇನು ಇಲ್ಲದಿದ್ದರೇನು
ನಿನ್ನ ಅದರಕೆ ಸಿಗದ ನನ್ನ ಮಧುರ ಪ್ರೇಮ ಇದ್ದರೇನು ಇಲ್ಲದಿದ್ದರೇನು
ನಿನ್ನ ಕನಸಿಗೆ ಸಿಗದ ನಾನು ಇದ್ದರೇನು ಇಲ್ಲದಿದ್ದರೇನು
ಆಡದ ಮನದ ಮಾತು
ಹಾಡುವ ಕೋಗಿಲೆ ಏಕೋ ಇಂದು ಎಲೆಗಳಲಿ ಮರೆಯಾಗಿದೆ
ಹಾರುವ ಪಾರಿಜಾತ ಏಕೋ ಇಂದು ಮೌನಕೆ ಶರಣಾಗಿದೆ
ತನ್ನ ತನವ ತೊರೆದು ಬದುಕುವುದಾದರು ಹೇಗೆ
ಬದುಕಿದರು ಅರ್ಥವಿಲ್ಲದ ಬದುಕು
ಅರ್ಥವಿಲ್ಲದ ಮಾತು, ಅರ್ಥವಾಗದ ಮಾತು, ಅರ್ಥವಾದರೂ ಬಾರದ ಸಾವಿರ ಮಾತು
ನೂರೆಂಟು ಪ್ರಶ್ನೆ ಅಲೆಅಲೆಯಾಗಿ ಬರಲು, ಯಾಕೆ ಹೀಗೆ ಅನ್ನೋ ಅಸಮಾಧಾನದ ಮರು ಪ್ರಶ್ನೆಯೇ ಹೊರತು ಬೇರೇನೂ ತೋಚದು
ಜೀವನದ ಹಾದಿಯಲಿ ಹಿಂತಿರುಗಿ ನೋಡಿದರೆ ನನ್ನವರು ಅಂತ ಯಾರೂ ಇಲ್ಲ
"ಚಿಗುರುವ ಆಸೆ ಚಿವುಟಬೇಡಿ" ಎಂಬ ಕೂಗು ಕಿವಿಗಳಿಗೆ ಕೆಳದು
"ಮನಸಿನ ಚೀರಾಟ-ಅರಚಾಟ" ಕಣ್ಗಳಿಗೆ ಕಾಣದು
ಅಳುವ ಧಾರೆ ಕಣ್ಣಂಚಲಿ ತಡೆದಿರುವೆ
No comments:
Post a Comment